Monday 1 August 2016

ಆಟಿಮಾಸ...ಆಟೀತೊಂಜಿದಿನ...!


ಆಟಿ...

ಸಂಪ್ರದಾಯ ಪದ್ದತಿಗಳನ್ನು ಗಮನಿಸುವಾಗ ತುಳು ಜಾನಪದ ಸಂಸ್ಕೃತಿಯನ್ನು ಹೊಂದಿದ ಈ ಕರಾವಳಿಯಲ್ಲಿ  ’ಆಟಿ’ ತಿಂಗಳಲ್ಲಿ ಈ ವಿಶಿಷ್ಟ ಆಚರಣೆಯು ಕಂಡು ಬರುತ್ತದೆ.



ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆಯ ದಿನವನ್ನು ಆಟಿ ಅಮಾವಾಸ್ಯೆ ಎನ್ನುತ್ತಾರೆ. ಸಾಮಾನ್ಯವಾಗಿ ಭೀಮನ ಅಮಾವಾಸ್ಯೆಯೇ ಆಟಿ ಅಮಾವಾಸ್ಯೆಯಾಗಿದೆ. ತುಳುವರಲ್ಲಿ ಒಂದು ವಿಶೇಷ ಸಂಪ್ರದಾಯವಿದೆ.  ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ) ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ.



ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ.  ಅನ್ಯ ಆಹಾರ ಸೇವನೆಗೆ ಮೂದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ. ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರಿತು ಎಂಬ ಬಲವಾದ ನಂಬಿಕೆ ಇಲ್ಲಿ ಗಮನೀಯವೆನಿಸುತ್ತದೆ.


ಹಿಂದಿನ ಕಾಲದಲ್ಲಿ ಆಟಿತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಯಾಗಿ ಅಗ್ನಿ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ.


ರೋಗ ನಿರೋಧಕ: ಹಾಲೆಮರ ಹಾಲಿನಲ್ಲಿ ಸಸ್ಯ ಕ್ಷಾರದಂತಹ ಔಷಧೀಯ ಗುಣಗಳಿವೆ ಎಂದು ಕಂಡು ಬಂದಿದೆ. ಮರವು ಹೂಬಿಡಲು ಒಂದು ತಿಂಗಳು ಇರುವಾಗಲೇ ಸೌರಮಾನದ ಆಟಿ ತಿಂಗಳು ಬರುತ್ತದೆ. ಆಗ ಅದು ಸರ್ವರೋಗ ನಿವಾರಕ ಔಷಧೀಯ ಗುಣ ಸಮೃದ್ಧವಾಗಿ ತನ್ನೊಡಲಿನಲ್ಲಿ ಇಟ್ಟುಕೊಂಡಿತ್ತುದೆ. ಆದ್ದರಿಂದ ವೈದ್ಯಕೀಯದಲ್ಲಿ ಹೊಟ್ಟೆನೋವು, ಅತಿಸಾರ,ವಾತ, ಸುಂಧಿನೋವು, ಮಲೇರಿಯಾ, ಜ್ವರ, ಸ್ತ್ರೀರೋಗ, ಹುಣ್ಣುನಿವಾರಣೆಯಲ್ಲಿ ಬಳಕೆಯಾಗುವ ಔಷಧೀಯ ಗುಣಗಳು ಮರದ ಹಾಲು ಮತ್ತು ತೊಗಟೆಯಲ್ಲಿ ಕಂಡು ಬಂದಿವೆ.

ಆಟಿ ತಿಂಗಳು ಸ್ವರ್ಗಸ್ಥರಾದವರಿಗೆ ಅನ್ನವಿಡುವ ತಿಂಗಳು. ಅವತ್ತು ರಾತ್ರಿ ತಿಂಡಿ, ಅನ್ನ ಪದಾರ್ಥಗಳನ್ನು ಮಾಡಿ ಅಗಲಿದ ಹಿರಿಯರಿಗೆ ಇಟ್ಟು , ನಂತರ ತಾವು ಊಟ ಮಾಡುತ್ತಾರೆ. ಆಟಿಯಲ್ಲಿ ಮದರಂಗಿ ಚಿಗುರನ್ನು ಯಾರೂ ಮುರಿಯುವುದಿಲ್ಲ. ಯಾಕೆಂದರೆ ಆಟಿಯಲ್ಲಿ ಮದರಂಗಿ ಹಚ್ಚುವ ಸಂಭ್ರವನ್ನು ಯಾರೂ ಆಚರಿಸುವುದಿಲ್ಲ.


ಔಷಧೀಯ ಶಾಸ್ತ್ರದಲ್ಲಿ ಎಷ್ಟೇ ಬದಲಾವಣೆಯಾದರೂ ಹಾಲೆರಸದ ಕುರಿತಂತೆ ಜನರ ನಂಬಿಕೆ ಮಾತ್ರ ಬದಲಾಗಿಲ್ಲ. ಇದು ಸಾಮಾಜಿಕವಾಗಿಯೂ ಧಾರ್ಮಿಕವಾಗಿಯೂ ತನ್ನದೇ ಸ್ಥಾನ ಉಳಿಸಿಕೊಂಡಿದೆ. ತುಳುನಾಡಿನಲ್ಲಿ ಇದು ಹಿಂದೂಗಳಲ್ಲದೆ ಇತರ ಧರ್ಮೀಯರಲ್ಲೂ ಕಂಡು ಬರುತ್ತದೆ. ಆದುದರಿಂದ ಇಂದಿಗೂ ಈ ಕರಾವಳಿಯ ಹಳ್ಳಿಗಾಡಿನ ಜನರು ಆಟಿ ಅಮಾವಾಸ್ಯೆಯಂದು ಈ ವಿಶಿಷ್ಟ ಆಚರಣೆಯನ್ನು ಆಚರಿಸುತ್ತಾರೆ ಅನ್ನುವುದು ಹೆಮ್ಮೆ ಪಡುವ ವಿಷಯವೇ ಸರಿ...


ಆಷಾಢ ಮಾಸದ ಅಮಾವಾಸ್ಯೆ (ಆ. 2) ಆಟಿ ಅಮಾವಾಸ್ಯೆ ಎಂದು ಜನಜನಿತ. ಅಂದು ರೋಗ ನಿರೋಧಕ ಶಕ್ತಿ ಇರುವ ಹಾಲೆ ಮರದ ತೊಗಟೆಯ ಕಶಾಯ ಸೇವಿಸುವ ಕ್ರಮ ವಿದೆ. ಪ್ರಾಯಃ ಕರಾವಳಿಯಲ್ಲಿ ಮಳೆ ಹೆಚ್ಚಿಗೆ ಬರುವ ಕಾರಣ ಈ ಸಂಪ್ರದಾಯ ಕರಾವಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ.

ಅದೇ ದಿನ ಮುಂಜಾವ ತೊಗಟೆ ತೆಗೆಯಲು ಹೋಗುತ್ತಾರೆ. ನಸುಕಿನಲ್ಲಿ ಸರಿಯಾಗಿ ತೋರದ ಕಾರಣ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯೂ ಇರುವುದರಿಂದ ಜಾಗರೂಕತೆ ವಹಿಸಬೇಕು. ಹಾಲೆ ಮರದ ರೀತಿ ಕಾಣುವ ಕಾಸರ್ಕ (ಕಾಸಾನು) ಮರದ ತೊಗಟೆ ಯನ್ನು ತಂದು ಜೀವಕ್ಕೆ ಅಪಾಯ ಮಾಡಿಕೊಂಡಿರುವ ಉದಾ ಹರಣೆಗಳು ಇವೆ. ಹಿಂದಿನ ದಿನವೇ ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ. ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು.

ಹಾಲೆ ಮರವನ್ನು ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಸಪ್ತ
ಪರ್ಣ ಎಂದು ಹೆಸರು ಬಂದಿರಬೇಕು. ಹೀಗಾಗಿ ಸಪ್ತಪರ್ಣಿ ಎಂದೂ ಕರೆಯುತ್ತಾರೆ.

ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ. ಎಷ್ಟೋ ಔಷಧಿಗಳನ್ನು ಸೇವಿಸುವವರಿಗೆ ಆ ಔಷಧಿಯಲ್ಲಿ ಹಾಲೆ ಮರದ ಅಂಶಗಳಿವೆ ಎನ್ನುವುದೂ ಗೊತ್ತಿರುವುದಿಲ್ಲ. ಬ್ರಾಹ್ಮಿà ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾವವೇ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು.
ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಪಾಲಿಸುವ ಸಂಸ್ಕೃತಿ ಕಾಣಬಹುದಾಗಿದೆ.

ಗರಿಷ್ಠ ಎಷ್ಟು ಸ್ವೀಕರಿಸಬಹುದು?
ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ. ಸೇವಿಸ
ಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಕೆಲವರು ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಮಿಶ್ರ ಮಾಡುವುದೂ ಇದೆ.

ವಿಶ್ವಭಾರತಿ ವಿ.ವಿ.-ಪಶ್ಚಿಮಬಂಗಾಲ ಕೋಲ್ಕತಾ ಸಮೀಪದ ರವೀಂದ್ರನಾಥ ಠಾಗೋರರು 1921ರಲ್ಲಿ ಸ್ಥಾಪಿಸಿದ ಶಾಂತಿನಿಕೇತನಕ್ಕೂ, ಪಶ್ಚಿಮಬಂಗಾಲ ರಾಜ್ಯಕ್ಕೂ, ಹಾಲೆ ಮರಕ್ಕೂ ಅವಿನಾಭಾವ ಸಂಬಂಧವಿದೆ. ರವೀಂದ್ರನಾಥರ ತಂದೆ ದೇವೇಂದ್ರನಾಥ ಠಾಗೋರರು ರಾಯು³ರಕ್ಕೆ ದೋಣಿಯಲ್ಲಿ ಸಾಗುವಾಗ ಹಾಲೆ ಮರದ ಬುಡದಲ್ಲಿ ಸಂಜೆಯ ಧ್ಯಾನಕ್ಕೆ ಕುಳಿತರು. ಇದು 1862ರಲ್ಲಿ. ಅಲ್ಲಿ ಅವರಿಗೆ ಏನೋ ಶಾಂತಿ ಸಮಾಧಾನ ಸಿಕ್ಕಿ ಸ್ವಲ್ಪ ಭೂಮಿಯನ್ನು ಖರೀದಿಸಿದರು. ಇದನ್ನೇ ರವೀಂದ್ರನಾಥರು ವಿಸ್ತರಿಸಿ ಶಾಂತಿನಿಕೇತನ (ಶಾಂತಿಯ ನಿವಾಸ) ಸ್ಥಾಪಿಸಿದರು. ಅನಂತರ ವಿಶ್ವಭಾರತಿ ವಿ.ವಿ.ಯಾಗಿ ಪರಿವರ್ತನೆಗೊಂಡಿತು. ಇಲ್ಲಿ ಸಾಕಷ್ಟು ಹಾಲೆ ಮರಗಳಿವೆ. ಘಟಿಕೋತ್ಸವದ ಸಂದರ್ಭ ವಿದ್ಯಾರ್ಥಿಗಳಿಗೆ ಹಾಲೆ ಮರದ ಐದು ಎಲೆಗಳನ್ನು ಕೊಡುವ ಸಂಪ್ರದಾಯ ಬೆಳೆದುಬಂದಿದೆ. ಹಾಲೆ ಮರ ಪಶ್ಚಿಮಬಂಗಾಲ ರಾಜ್ಯದ ವೃಕ್ಷವಾಗಿದೆ.

No comments:

Post a Comment